ಮಹಾವೈದ್ಯನಾಥ ಅಯ್ಯರ್
1844-93. ಕರ್ನಾಟಕ ಸಂಗೀತಲೋಕದಲ್ಲಿ ತ್ಯಾಗರಾಜರ ಅನಂತರ ಬಂದ ಗಾಯಕರು ಹಾಗೂ ಶ್ರೇಷ್ಠ ವಾಗ್ಗೇಯಕಾರರು. ಏಳನೆಯ ವಯಸ್ಸಿಗೇ ರಾಗಾಲಾಪನೆ ಮತ್ತು ಪಲ್ಲವಿ ಹಾಡುವ ಸಾಮಥ್ರ್ಯಗಳಿಸಿಕೊಂಡು ಹತ್ತು ವರ್ಷವಾದಾಗ ಅಣ್ಣ ರಾಮಸ್ವಾಮಿ ಶಿವನ್ ಅವರ ಜೊತೆಗೆ ಕಚೇರಿಗಳಲ್ಲಿ ಹಾಡುತ್ತಿದ್ದರು.

ತ್ಯಾಗರಾಜರ ನೇರ ಶಿಷ್ಯರ ಪೈಕಿ ಒಬ್ಬರಾದ ಮನಂಬು ಚಾವಡಿ ವೆಂಕಟ್ಟಸುಬ್ಬಯ್ಯನವರ ಬಳಿ ಸಂಗೀತಾಭ್ಯಾಸಮಾಡಿ ಚಿಕ್ಕವಯಸ್ಸಿನಲ್ಲೇ ಸಂಗೀತ ಕಚೇರಿಗಳನ್ನು ಕೊಡುವ ವೃತ್ತಿ ಅವಲಂಬಿಸಿದರು. ಇವರು ಪ್ರಾರಂಭದಿಂದಲೇ ತ್ಯಾಗರಾಜರ ಕೀರ್ತನೆಗಳಿಂದ ಪ್ರಭಾವಿತರಾಗಿದ್ದರು. ಒಮ್ಮೆ ಒಂದು ವಿದ್ವತ್ ಸಭೆಯಲ್ಲಿ ತರುಣ ವೈದ್ಯನಾಥ ಅಯ್ಯರ್ ತ್ಯಾಗರಾಜರ ಚಕ್ರವಾಕರಾಗದ ಬಗೆಗೆ ಅದ್ಭುತ ವ್ಯಾಖ್ಯಾನ ನೀಡಿ ನೆರೆದ ವಿದ್ವನ್ಮಣಿಗಳನ್ನು ವಿಸ್ಮಯಗೊಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಪೆರಿಯ ವೈದ್ಯನಾಥ ಅಯ್ಯರ್ ಅವರಂಥ ವಿದ್ವಾಂಸರಿಗೆ ಕೂಡ ತ್ಯಾಗರಾಜರು ಚಕ್ರವಾಕರಾಗದಲ್ಲಿ ಸುಗಣಮುಲೆ ಮತ್ತು ಎಟುಲ ಬ್ರೋಟುವೊತ್ತೆಲಿಯ ಎಂಬ ಕೀರ್ತನೆಯನ್ನು ರಚಿಸಿದ್ದಾರೆಂಬ ವಿಷಯ ತಿಳಿದಿರಲಿಲ್ಲ. ಅಯ್ಯರ್ ಅವರಿಗೆ ಆಗಿನ್ನೂ ಹನ್ನೆರಡು ವರ್ಷ. ವೈದ್ಯನಾಥ ಅಯ್ಯರ್ ಅವರು ಹೆಚ್ಚು ಕೃತಿಗಳನ್ನು ಅಭ್ಯಸಿಸಲು ಆಗದೇ ಇದ್ದರೂ ತಮ್ಮ ಕಚೇರಿಗಳಲ್ಲಿ ಕೆಲವೇ ಸುಪ್ರಸಿದ್ಧ ಕೀರ್ತನೆಗಳನ್ನು ಹಾಡಿ ಆಲಾಪನೆ ತಾನು ಪಲ್ಲವಿ ನೆರವಲ್ ಮತ್ತು ಕಲ್ಪನಾಸ್ವರಗಳಿಂದ ಸಭಿಕರನ್ನು ರಂಜಿಸುತ್ತಿದ್ದರು. ಭಾರತೀಯ ಸಂಗೀತಗಾರರಲ್ಲಿ ಮಹಾ ಎಂಬ ಬಿರುದನ್ನು ಪಡೆದು ಗೌರವಿಸಲ್ಪಟ್ಟವರು ಬಲು ವಿರಳ. ಕಾನಡಾರಾಗದ ಸಿಂಹನಂದನ ತಾಳದಲ್ಲಿ ಇವರು ರಚಿಸಿದ ಗೌರಿನಾಯಕ ತಿಲ್ಲಾನ ಮಹತ್ತ್ವದ ಕೃತಿ. ಕರ್ನಾಟಕದ ಸಂಗೀತದ ಮೇರು ಕೃತಿಗಳಲ್ಲೊಂದಾಗಿ ಮೆರೆಯುವ ಎಪ್ಪತ್ತೆರಡು ಮೇಳ ರಾಗ ಮಾಲಿಕಾವನ್ನು ಇವರು ಏಳು ದಿನಗಳಲ್ಲಿ ರಚಿಸಿದರು. ಸಂಗೀತ ರಚನೆಯ ಇತಿಹಾಸದಲ್ಲೇ ಅಸಾಮಾನ್ಯ ಸಾಧನೆ ಇದು.

 ಮಹಾವೈದ್ಯನಾಥ ಅಯ್ಯರ್ ಅವರೂ ಅವರ ಕುಟುಂಬದವರೂ ಪರಮದೈವ ಭಕ್ತರು. ಆಚಾರವಿಚಾರಗಳಲ್ಲಿ ವ್ರತೋಪವಾಸಗಳಲ್ಲಿ ಇವರದು ಎತ್ತಿದ ಕೈ. ಅಯ್ಯರ್ ಅವರದು ಮನಸೆಳೆಯುವ ಪ್ರತಿಭಾಪೂರ್ಣ ವ್ಯಕ್ತಿತ್ವ. ಯಾವಾಗಲೂ ಗೌರೀಶಂಕರ ರುದ್ರಾಕ್ಷಿಮಾಲೆ ಧರಿಸುತ್ತಿದ್ದ ಅವರ ಸೌಮ್ಯ ಪ್ರಸನ್ನ ಕಾಂತಿಯುಕ್ತ ಮುಖ ಅವರ ಆಧ್ಯಾತ್ಮಶ್ರೀಯನ್ನು ಸಾರಿ ಹೇಳುವಂತಿತ್ತು. ಎಲ್ಲರೂ ಅವರನ್ನು ಶಿವಸಾನ್ನಿಧ್ಯದವರು (ಶಿವಪ್ಪಳಂ) ಎಂದು ತಿಳಿದು ಶಿವನವಾಳ್ (ಶಿವನವರು) ಎಂದು ಕರೆಯುತ್ತಿದ್ದರೇ ಹೊರತು ಅಪರೂಪಕ್ಕಾದರೂ ಅವರ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್ ಅವರು ತಮಗಿಂತ ಒಂದೂವರೆ ವರ್ಷ ದೊಡ್ಡವರಾದ ವೈದ್ಯನಾಥ ಅಯ್ಯರ್ ಅವರ ಮನೆಗೆ ಪ್ರತಿವರ್ಷವೂ ಉಪಾಕರ್ಮದ ದಿನ ಹೋಗಿ ಶಿವನವಾಳ್ ಎಂದು ಅವರಿಗೂ ನಮಸ್ಕಾರಮಾಡಿ ಆಶೀರ್ವಾದ ಪಡೆಯುತ್ತಿದ್ದರು.

ವೈದ್ಯನಾಥ ಅಯ್ಯರ್ ಅವರ ಸಂಪದ್ಯುಕ್ತ ಶಾರೀರ ದೈವದತ್ತವಾದದ್ದು. ಕಷ್ಟಪಟ್ಟು ಅಭ್ಯಾಸದಿಂದ ರೂಢಿಸಿಕೊಂಡದ್ದಲ್ಲ. ಕಂಡವರು ಕರುಬುವಂತಿದ್ದ ಈ ಶಾರೀರ ಸಂಪತ್ತನ್ನು ಉಳಿಸಿಕೊಳ್ಳಲು ಅವರೇ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದರು. ತಮ್ಮ ಜೀವಮಾನದಲ್ಲಿ ಅವರು ಉಳಿದೆಲ್ಲ ಸಂಗೀತಗಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಸಂಭಾವನಾಯುಕ್ತ ಕಚೇರಿಗಳನ್ನು ನಡೆಸಿದ್ದಾರೆ. ವೈದ್ಯನಾಥಅಯ್ಯರ್ ಅವರಿಗೂ ಅವರ ಸೋದರ ರಾಮಸ್ವಾಮಿಶಿವನ್ ಅವರಿಗೂ ಮಹಾರಾಜರುಗಳಿಂದ ದೊರೆತ ಮನ್ನಣೆಗಳು ಅಪಾರ.

ಪುದುಕೋಟೆಯ ಮಹಾರಾಜರು ಇವರಿಬ್ಬರ ಕಚೇರಿ ಏರ್ಪಡಿಸಿ ಗಾಯನ ಕೇಳಿ ಮಹಾ ಆನಂದಭರಿತರಾಗಿ ವಸ್ತ್ರಭೂಷಣ ಖಿಲ್ಲತ್ತುಗಳನ್ನು ಬಹುಮಾನವಾಗಿ ಕೊಟ್ಟದ್ದೊಂದೇ ಅಲ್ಲದೆ ಅವರನ್ನು ತಮ್ಮ ದರ್ಬಾರ್ ರಥದಲ್ಲಿ ಕೂರಿಸಿ ಸಂಗೀತವಾದ್ಯಗಳೊಂದಿಗೆ ಪುದುಕೋಟೆಯ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿದರು ಕೂಡ. ಅಯ್ಯರರು ಮೈಸೂರು ಮಹಾರಾಜರಿಂದಲೂ ಆಹ್ವಾನ ಪಡೆದು ಬಂದರು. ಅಂದು ಅವರು ಭೈರವಿ ರಾಗದಲ್ಲಿ ಹಾಡಿದ ಚಿಂತಯಮಾ ಎಂಬ ಕೀರ್ತನೆಯನ್ನು ಮಹಾರಾಜರು ಫೋನೋಗ್ರಾಫಿನ ಧ್ವನಿ ತಟ್ಟೆಯಲ್ಲಿ ಮುದ್ರಿಸಿಕೊಂಡು ಅಯ್ಯರ್ ಅವರಿಗೆ ಅನಂತರ ಕೇಳಿಸಿ ವಿಸ್ಮಯಗೊಳಿಸಿದರು. ಕಚೇರಿಯಲ್ಲಿ ಅರಮನೆಯ ಸಂಪ್ರದಾಯದ ಉಡುಪನ್ನು ಧರಿಸಲು ಅಯ್ಯರ್ ಅವರು ಸಂಕೋಚಪಟ್ಟಾಗ ಮಹಾರಾಜರು ಅವರಿಗೆಂದೇ ವಿಶೇಷವಾದ ನಿಲುವಂಗಿ ಒಂದನ್ನೂ ಕಲ್ಕಿಸರವನ್ನೂ ಸೇರಿಸಿದ ಪೇಟ ನೀಡಿ ಗೌರವಿಸಿದರು.

ತಿರುವಾಂಕೂರ್ ಮಹಾರಾಜ ಆಯಿಲ್ಯಮ್ ತಿರುನಾಳರ ಆಸ್ಥಾನದಲ್ಲಿ ಇವರು ಹಾಡಿದ (ಅಲ್ಲಿ ಅಷ್ಟಾಗಿ ಬಳಕೆಯಲ್ಲಿಲ್ಲದಿದ್ದ) ಖರಹರಪ್ರಿಯ ರಾಗ ಅದ್ಭುತ ಪರಿಣಾಮ ಉಂಟುಮಾಡಿತು. ಆ ಕಚೇರಿ ಸಂಗೀತದ ಇತಿಹಾಸದಲ್ಲೇ ಒಂದು ದಾಖಲೆ ಸ್ಥಾಪಿಸಿತು. ಕನಕಾಂಗಿ ಮತ್ತಿತರ ಕೆಲವು ಅಪೂರ್ವದ ರಾಗಗಳನ್ನು ಹಾಡುವುದರಲ್ಲಿ ಅಯ್ಯರ್ ಹೆಸರು ಪಡೆದಿದ್ದರು. ಪಾಲ್ಘಾಟಿನಲ್ಲಿ ನಡೆದ ಒಂದು ಕಚೇರಿಯಲ್ಲಿ ದೀಕ್ಷಿತರ ವಾತಾಪಿ ಗಣಪತಿಂಭಜೇಹಮ್ ಎಂಬ ಹಂಸಧ್ವನಿರಾಗದ ಹಾಡಿಕೆಗೆ ಶ್ರೋತೃಗಳು ಮಾರುಹೋಗಿ ಮತ್ತೆ ಮತ್ತೆ ಅದನ್ನು ಬೇಡಿ ಮಧ್ಯದಲ್ಲಿ ಕಡೆಯಲ್ಲಿ ಹೀಗೆ ಮೂರು ಬಾರಿ ಹಾಡಿಸಿದರು.

 ಮಹಾವೈದ್ಯನಾಥ ಅಯ್ಯರ್ ಅವರ ಗಾನಸುಧೆ ಕೇಳಿದ ಹಳೆಯ ತಲೆಮಾರಿನ ಸಂಗೀತ ವಿದ್ವಾಂಸರೊಬ್ಬರು ಅಯ್ಯರರ ತಂದೆ ಪಂಚನಾದ ಅಯ್ಯರ್ ಅವರನ್ನು ಒಮ್ಮೆ ಭೇಟಿಯಾದಾಗ ನಿಮ್ಮ ಮಗ ಎಂಥ ಸುಮಧುರ ಕಂಠವನ್ನು ಹೊಂದಿದ್ದಾನೆ. ತ್ಯಾಗರಾಜರ ತರುವಾಯ ಕರ್ಣಾನಂದ ಸಂಗೀತ ನೀಡಲು ಇಂಥ ಒಬ್ಬ ಸಂಗೀತಗಾರನಾದರೂ ಹುಟ್ಟಿಕೊಂಡನಲ್ಲ ಎಂದರಂತೆ. 										
 (ಎಸ್.ಆರ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ